ಆಮಶಂಕೆ -
ಹೊಟ್ಟೆನೋವು ನುಲಿತಗಳೊಂದಿಗೆ ಮಲದಲ್ಲಿ ಆಮು, ರಕ್ತ ಬೀಳುವ ಬೇನೆಯ ಒಂದು ಲಕ್ಷಣ. ಇದನ್ನೇ ರಕ್ತಭೇದಿ ಅನ್ನುವುದೂ ಉಂಟು. ಕರುಳುಗಳಲ್ಲಿ ಸೊಂಕು ಹತ್ತದೆ ಹೀಗೆಯೇ ಆಮು, ರಕ್ತ ಬೀಳುವುದಾದರೂ, ಹೆಗ್ಗರುಳಿನ (ಕೋಲನ್) ಸೊಂಕಿನಿಂದ ಆದುದಕ್ಕೆ ಈ ಹೆಸರು ರೂಢಿಯಲ್ಲಿದೆ. ಆಮಶಂಕೆಯಲ್ಲಿ ಹೊಟ್ಟೆನುಲಿತ ಮುಕ್ಕುರಿಗಳೊಂದಿಗೆ (ಟೆನಿಸ್ಮನ್) ಮಲದಲ್ಲಿ ಆಮು, ರಕ್ತ ಬೆರೆತಿರುತ್ತವೆ. ಆದರೆ ಸೋಂಕು ತುಸುವಾಗಿದ್ದರೆ ಯಾವ ರೋಗ ಲಕ್ಷಣಗಳೂ ಹೊರದೋರದೆ ಇರಬಹುದು. ಅದೇ ಕಟ್ಟು ನಿಟ್ಟಾಗಿದ್ದರೆ ಇದ್ದಕ್ಕಿದ್ದ ಹಾಗೆ ಜೋರಾಗಿ ಮಾರಕವಾಗುವುದುಂಟು ಚಿಕಿತ್ಸೆ ಕೈ ಗೂಡಲು ರೋಗದ ಖಚಿತವಾದ ಕಾರಣ ಗೊತ್ತಾಗಬೇಕು, ಆಮಶಂಕೆ ಏಕಾಣುಜೀವಿಕ (ಬ್ಯಾಕ್ಟೀರಿಯಲ್), ಮುಂಜೀವಿಕ (ಪೋಟೊಜೋವಲ್), ಕರುಳುಹುಳುವಿನದು (ಹೆಲ್ಮಿಂತಿಕ್) ಆಗಿರಬಹುದು. ಈ ಗುಂಪುಗಳಲ್ಲಿ ಕ್ರಮವಾಗಿ ದಂಡಾಣುಜೀವಿಗಳು(ಬೆಸಿಲೈ), ಚಲ್ಕಣಗಳು (ಅಮೀಬ), ಸೀಳೂಡಲಿಗಳು (ಷಿಸ್ಟೊಸೋಮ್ಸ್) ತೀರ ಸಾಮಾನ್ಯಕಾರಕಗಳು.

	ಏಕಾಣುಜೀವಿಕ ಆಮಶಂಕೆಗಳು : ಮುಖ್ಯವಾಗಿ ಮೂರು ಷೀಗಜೀವಿಗಳು (ಷೀಗೆಲ್ಲ) ಕಾರಣಗಳು; ಷೀಗನ ಷಿಗಜೀವಿ (ಷೀಗೆಲ್ಲ ಷೀಗೆ), ಫ್ಲೆಕ್ಸ್‍ನರನ ಷೀಗಜೀವಿ (ಷೀಗೆಲ್ಲ ಫ್ಲೆಕ್ಸ್‍ನರಿ), ಸೊನ್ನೆನ ಷೀಗಜೀವಿ(ಷೀಗೆಲ್ಲ ಸೊನ್ನೆಯೈ). ಷೀಗನ ದಂಡಾಣುಜೀವಿಯಷ್ಟು (ಬೆಸಿಲ್ಲಸ್) ಸರಕ್ಕನೆ ಬಲಿ ತೆಗೆದುಕೊಳ್ಳುವಷ್ಟು ಮಾರಕವಾದ ಆಮಶಂಕೆ ಉಷ್ಣವಲಯದಲ್ಲಿ ಇನ್ನೊಂದಿಲ್ಲ. ಕಾಲರವನ್ನೂ ಹೋಲುವ ಈ ಆಮಶಂಕೆ ಅಷ್ಟೇ ಭಯಂಕರ. ಅನೇಕ ವೇಳೆ, ಮೆಲುಪಿನ ಆಮಶಂಕೆಗೆ ಫ್ಲೆಕ್ಸ್‍ನರನ ದಂಡಾಣುಜೀವಿಗಳು ಕಾರಣ, ಸೊನ್ನೆನ ದಂಡಾಣುಜೀವಿ ಚಳಿನಾಡುಗಳಲ್ಲಿ ಹೆಚ್ಚು; ಅದರಲ್ಲೂ ಎಳೆಗೂಸುಗಳು, ಮಕ್ಕಳಲ್ಲಿ ಸಾಂಕ್ರಾಮಿಕವಾಗಿ ಬಲು ಬೇಗನೆ ಹರಡುತ್ತದೆ. ಹರೆಯದವರಲ್ಲಿ ಬರೀ ಉಚ್ಚಾಟವಾಗುತ್ತದೆ. ಈ ರೋಗಾಣುಗಳನ್ನೆಲ್ಲ ಅವುಗಳ ವಿಶಿಷ್ಟವಾದ ತಳಿಯೆಬ್ಬಿಕ (ಕಲ್ಚರಲ್), ರಕ್ತರಸಿಕೆಯ (ಸೀರಂ) ಗುಣ ಲಕ್ಷಣಗಳಿಂದ ಗುರುತಿಸಬಹುದು.
ಲಕ್ಷಣಗಳು : ಮುಖ್ಯವಾಗಿ ದೊಡ್ಡ ಕರುಳಿನಲ್ಲಿ ಲೋಳೆಪರೆಯಲ್ಲಿ (ಮ್ಯೂಕಸ್ ಮೆಂಬ್ರೇನ್) ಉರಿತ (ಇನ್‍ಫ್ಲಮೇಷನ್) ಆಗುವುದು. ಕೆಲವೇಳೆ ಸಣ್ಣ ಕರುಳಿನ ಕೊನೆಯ ಭಾಗಕ್ಕೂ ಹರಡಿ, ಲೋಳೆಪರೆ ಮೇಲ್ಮೇಲೇ ಕೊಳೆಯಬಹುದು. ಅಮಶಂಕೆಯ ಬಗೆಬಗೆಯ ಏಕಾಣುಜೀವಿಗಳು ಬಿಡುವ ಹೊರಜೀವಿ ವಿಷಗಳು (ಎಕ್ಸೊಟಾಕ್ಸಿನ್ಸ್) ರಕ್ತಗತವಾಗುವುದರಿಂದಲೂ ಹೀಗೆ ಹಾಳಾದ್ದನ್ನು ಹೊರಕಳೆವಾಗಿನ, ಮೈಯ ಯತ್ನಗಳಿಂದಲೂ ಕರುಳು ಕೆರಳಿ, ಹೊಟ್ಟೆ ಶೂಲೆ, ಉಚ್ಚಾಟ ಆಗುತ್ತದೆ. ಲೋಳೆಪರೆಯಲ್ಲಿ ಹುಣ್ಣಾಗಿ ಕೊಳೆವುದರಿಂದ ಮಲದಲ್ಲಿ ಆಮು, ರಕ್ತ, ಕೀವು, ಗೋಚೂ (ಸ್ಲಫ್) ಆಗಿ ಬೀಳುತ್ತವೆ. ಅದರಲ್ಲೂ ಷೀಗನ ದಂಡಾಣುಜೀವಿಗಳು ಬಲವಾದ ಹೊರಜೀವಿ ವಿಷವನ್ನು ತಯಾರಿಸುತ್ತವೆ. ಇದರಿಂದ ನಂಜೇರಿ, ಮೈಯಲ್ಲಿನ ಬಹುಪಾಲು ನೀರು ಕಳೆದುಹೋಗಿ, ನೇರವಾಗೋ ಮೂತ್ರಪಿಂಡಗಳ ಸೋಲುವೆಯಿಂದಲೋ ರೋಗಿ ಸಾಯಬಹುದು. ಈ ಆಮಶಂಕೆ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರಬಹುದು. ಎಲ್ಲೊ ತುಸು ಕಂಡಂತಾಗಿ ಹಾಗೇ ಅಣಗಬಹುದು. ದಿನಕ್ಕೆ 2-60 ಸಾರಿ ಉಚ್ಚಾಟವಾಗಬಹುದು. ರಕ್ತ, ಆಮು ಹೆಚ್ಚಾಗಿದ್ದು ಮಲ ತೀರ ಕಡಿಮೆ ಇರುತ್ತವೆ, ಇಲ್ಲದೆಯೂ ಇರಬಹದು. ಇದ್ದಕ್ಕಿದ್ದಂತೆ, ವಿಪರೀತವಾಗಿ ಬಲು ರಕ್ತ ವಿಷವೇರಿ 1-2 ದಿವಸಗಳಲ್ಲೇ ಸಾಯುವುದು ಅಪೂರ್ವವಲ್ಲ. ಹೊಸ ಊರುಗಳಿಗೆ ಹೋಗುವವರಲ್ಲಂತೂ ಇದು ಸಿಡಿವಂತೆ ಕಾಡುತ್ತದೆ. ಕಾಲರ ರೋಗವೆಂದು ತಪ್ಪು ತಿಳಿವಷ್ಟು ಉಚ್ಚಾಟ ಬಲವಾಗಿರುವುದು. 3-4 ತಾಸುಗಳಲ್ಲಿ ಇನ್ನೂ ಜೋರಾಗುತ್ತದೆ. ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡರೂ, ಕೆಲವೇ ತಾಸುಗಳಲ್ಲಿ ಜ್ವರ ಏರುತ್ತದೆ. ರೋಗಿಗೆ ಬಹಳ ನಂಜೇರಿ, ಮೈಯಲ್ಲಿ ನೀರು ಸಾಲದಾಗುವ ಪರಿಣಾಮ ಬೇಗನೆ ತಲೆದೋರುವುದು. ಕೆಲವೇಳೆ ವಾಂತಿ ಆಗುವುದುಂಟು. ಹೊಟ್ಟೆಯೆಲ್ಲ ನೋವು, ಮುಕ್ಕುರಿ ಇರುವುವು. ರಕ್ತ, ಆಮು ಬೇರೂರಿದರೆ, ಆಯಾಸ, ದಣಿವು, ನಿತ್ರಾಣಗಳಿರುತ್ತವೆ. ಕೆಲವೇಳೆ ಈ ಆಮಶಂಕೆಯೊಂದಿಗೆ, ಕೀಲುರಿತವಾಗಿ (ಆತ್ರ್ತೈಟಿಸ್) ಊದುಕೊಂಡು ನೋವಿಡುತ್ತದೆ. ಮೂತ್ರ ಪಿಂಡುರಿತವೂ (ನೆಫ್ರೆಟಿಸ್) ಆಗಬಹುದು. ಒಮ್ಮೊಮ್ಮೆ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ನೀರ್ಡೊಳ್ಳು (ಅಸೈಟಿಸ್) ಆಗಲೂಬಹುದು.
ನಿದಾನ: ರೋಗಿಯ ಲಕ್ಷಣಗಳಿಂದಲೂ, ಮಲವನ್ನು ನೋಡಿ ಪರೀಕ್ಷಿಸುವುದರಿಂದಲೂ ಈ ಆಮಶಂಕೆಯನ್ನು ನಿಖರವಾಗಿ ಗುರುತಿಸಬಹುದು. ರಸಿಕೆ ತುಂಬಿದ ರಕ್ತ ಕಲೆಗಳು ಬೆರೆತ ಆಮು ಇಲ್ಲಿ ವಿಶೇಷ. ಆಯಾ ರೋಗಾಣುಗಳಿಗೆ ತಕ್ಕ ಆಯಿದ ಅಗಾರಿನ ತಳಿರ್ವಸೆಯ ನಡುವರ್ತಿಗಳಲ್ಲಿ (ಕಲ್ಚರ್ ಮೀಡಿಯ) ಹುಲುಸಾಗಿ ಬೆಳೆಯು ಬಿಟ್ಟು ಬೇರ್ದೆಗೆದು (ಐಸೊಲೇಟ್) ಗುರುತಿಸಬಹುದು. ಮಿಣಿದರ್ಶಕದಲ್ಲಿ ನೋಡಿದರೆ, ರೋಗಿಯ ಕರುಳಿನ ಸುರಿಕೆಗಳಲ್ಲಿ ನಿಡುಂಬಕಣಗಳಂಥವು (ಮ್ಯಾಕ್ರೊಫೇಜಸ್) ದೊಡ್ಡ ಊತಕ (ಟಿಷ್ಯೂ) ಕಣಗಳ, ಲೋಳೆ ಪರೆಯಿಂದ ಬಂದ ಕೀವಿನ ಬಿಳಿಕಣಗಳು ವಿಶಿಷ್ಟವಾಗಿ ಕಾಣುತ್ತವೆ. ಕೂರಾದ (ಅಕ್ಯೂಟ್) ಏಕಾಣುಜೀವಿಕ ಆಮಶಂಕೆಯಲ್ಲಿ ಗುದದ ಮೂಲಕ ಕೊಳವೆ ತೂರಿಸಿ, ಬೆಳಕು ಹಾಯಿಸಿ ಹೆಗ್ಗುರುಳಿನೊಳಗೆ ನೋಡಬೇಕಾಗಿ ಬರುವುದು ಅಪೂರ್ವ. ಹಾಗೂ ನೋಡಿದಲ್ಲಿ ಲೋಳೆಪರೆ ಒರಟೊರಟಾಗಿ ತರಕಲಾಗಿ ಕಾಣುವುದು.
ಚಿಕಿತ್ಸೆ : ರೋಗ ಉಲ್ಭಣವಾಗಿರುವಾಗ, ರೋಗಿ ಹಾಸಿಗೆಯಲ್ಲಿ ಮಲಗೇ ತೀರಬೇಕು. ಮೊದಲೆರಡು ದಿವಸಗಳು ಯಾವ ಆಹಾರವನ್ನೂ ಕೊಡಬಾರದು. ಆದರೆ ಕೊಂಚ ಉಪ್ಪು ಹಾಕಿದ ನೀರನ್ನು ಮಾತ್ರ ದಂಡಿಯಾಗಿ ಕುಡಿಸುತ್ತಿರಬೇಕು. ಸಲ್ಪ ಮದ್ದುಗಳನ್ನು ಕೊಡುವುದೇ ಇದರ ಚೆನ್ನಾದ ಚಿಕಿತ್ಸೆ. ಸಲ್ಫಸಕ್ಸಿಡೀನ್, ಸಲ್ಪಡಯಜಿನ್, ಸಲ್ಫತ್ಯಾಲಜೋಲ್‍ಗಳು ಷೀಗಜೀವಿಗಳು ಗುಣಿತವಾಗುವುದನ್ನು ಅಣಗಿಸುವುದರಿಂದ, ಲೋಳೆಪರೆಯೊಳಕ್ಕೆ ರೋಗಾಣುಗಳು ನುಗ್ಗುವುದು ತಪ್ಪಿ ಜೀವಿಷ(ಟಾಕ್ಸಿನ್) ತಯಾರಿಕೆ ನಿಂತು, ಮೈಯ ಎಂದಿನ ರೋಗತಡೆವ ಬಲ ಹೆಚ್ಚಿ ಸೋಂಕನ್ನು ಹೋಗಲಾಡಿಸುವುವು. ಈ ಮದ್ದುಗಳನ್ನು ನುಂಗುತ್ತಿರುವಾಗ, ಅಲ್ಲದೆ ಉಚ್ಚಾಟದಿಂದ ಮೈ ನೀರು ಬಹಳವಾಗಿ ಕಳೆವುದರಿಂದ, ಮುಖ್ಯವಾಗಿ ನೀರು ಒಳಸೇರುತ್ತಿದ್ದರೆ ಕೆಡುಕಿಲ್ಲ. ಕುಡಿಯಲಾಗದಿದ್ದರೆ, ವಾಂತಿ ಆಗುತ್ತಿದ್ದರೆ, 2-3 ಲೀಟರುಗಳಷ್ಟು ಬೆಚ್ಚಗಿನ ಉಪ್ಪುನೀರನ್ನು ನಿಧಾನವಾಗಿ ರಕ್ತನಾಳದ ಒಳಕ್ಕೆ ಬಿಡುವ ಚುಚ್ಚುಗೆಯನ್ನು ಜೋಡಿಸಿರುವುದುಂಟು. ತೀವ್ರವಾದ ಷೀಗಜೀವಿಗಳ ಸೊಂಕುಗಳಲ್ಲಿ ಹುಟ್ಟೇಳುವ ಜೀವಿಗಳನ್ನು ಸಯ್ಗೊಳಿಸಲು (ನ್ಯೂಟ್ರಲೈಸ್) ತಕ್ಕ ಜೀವಿಷರೋಧಕಗಳನ್ನು (ಆ್ಯಂಟಿಟಾಕ್ಸಿನ್ಸ್) ಕೊಡಬೇಕಾಗಬಹುದು. ಜೀವಿರೋಧಕಗಳಲ್ಲಿ (ಆ್ಯಂಟಿಬಯೋಟಿಕ್ಸ್) ಸ್ಟ್ರೆಪ್ಟೊಮೈಸಿನ್, ಬಲೊಳ್ಳೆಯದು. ಇದನ್ನು ಬಾಯಲ್ಲಿ ನುಂಗಿಸಲೂ ಬಹುದು, ಚುಚ್ಚಿ ಕೊಡಲೂಬಹುದು. ಕ್ಲೋರಾಂಫೆನಿಕಾಲ್, ಆರಿಯೊಮೈಸಿನ್, ಆಕ್ಸಿಟೆಟ್ರಸೈಕ್ಲೀನುಗಳೂ ಅಷ್ಟೇ ಚೆನ್ನಾಗಿ ಕೆಲಸಕ್ಕೆ ಬರುತ್ತವೆ. ಜಠರದಲ್ಲಿ ಆಮ್ಲದ ಸುರಿಕೆ ತಗ್ಗಿದರೆ, ಕರುಳುಗಳಲ್ಲಿ ಇನ್ನಷ್ಟು ಸೊಂಕು ಒಳಸೇರುವುದನ್ನು ತಪ್ಪಿಸಲು, ತಕ್ಕ ಆಮ್ಲಗೂಡಿಸುವ ಮದ್ದುಗಳನ್ನು ಕೊಡಬೇಕು. ಜೀವಿಷದ ಕೀಲುರಿತದಂಥ ಮರುಚಲದ (ಸೆಕೆಂಡರಿ) ಸೋಂಕುಗಳಿಗೆ ತಕ್ಕ ಚಿಕಿತ್ಸೆ ಆಗಬೇಕು. ಆಮಶಂಕೆ ಹೆಚ್ಚು ದಿವಸಗಳು ಇದ್ದಾಗ, ಬಹಳ ಪಥ್ಯ ಮಾಡುತ್ತಲೇ ಇದ್ದರೆ, ರಕ್ತದಲ್ಲಿ ಪ್ರೊಟೀನು ಕೊರೆಯಾಗುತ್ತದೆ. ಇದನ್ನು ತಪ್ಪಿಸಲು, ಕೆಲವು ದಿವಸಗಳು ಕಳೆದ ಮೇಲಾದರೂ ಹೆಚ್ಚು ಜೀವಾತುಗಳು, ಪ್ರೊಟೀನುಗಳು ಕೂಡಿರುವ ಸಮತೋಲದ, ಪುಷ್ಟಿಕರ ಆಹಾರವನ್ನು ಸೇವಿಸುತ್ತ ಬರಬೇಕು.

ಮುಂಜೀವಿಕ ಆಮಶಂಕೆಗಳು: ಬಹುಮಟ್ಟಿಗೆ ಈ ಸೋಂಕಿಗೆ ಕಾರಣ ಊತಕಲಯಕ ಕರುಳ್ಚಲಕಣವೇ (ಎಂಟಮೀಬ ಹಿಸ್ಟೊಲಿಟಿಕ), ಅಪೂರ್ವವಾಗಿ ಬಾಸೆಗವಾದ (ಸಿಲಿಯೇಟ್) ಬ್ಯಾಲಾಂಟಿಡಿಯಂ ಕೋಲೈ ಕೂಡ ಈ ಆಮಶಂಕೆಯ ಕಾರಣವಾಗಬಹುದು. ಮಾನವನಿಗಿಂತ ಹಂದಿ ಮುಂತಾದ ಪ್ರಾಣಿಗಳಲ್ಲಿ ಇದು ಹೆಚ್ಚು. ಒಂದು ಬಗೆಯ ಮಲೇರಿಯ (ಪ್ಲಾಸ್ಮೋಡಿಯಂ ಫಾಲ್ಸಿಪಾರಂ) ರೋಗದಲ್ಲೂ ರೋಗಿಯ ಮಲದಲ್ಲಿ ಆಮು, ರಕ್ತ ಹೋಗಬಹುದು. ಕರುಳಿನ ಗೋಡೆಗಳಲ್ಲಿನ ಲೋಮನಾಳಗಳಲ್ಲಿ ಮಲೇರಿಯ ಪರಪಿಂಡಿಗಳು ಕಿಕ್ಕಿರಿದು ಕೂಡುವುದೇ ಇದರ ಕಾರಣ. (ನೋಡಿ- ಮಲೇರಿಯಾ)

	ಕಾಳಜ್ವರದ (ಕಾಲಾ ಅಜಾರ್) ಪರಪಿಂಡಿಯಿಂದ (ಲೀಷ್ಮಾನಿಯ ಡೊನೊವಾನಿ) ಕರುಳಲ್ಲಿ  ಸೋಂಕಾದರೆ ಲೀಷ್ಮನ್ ಬೇನೆಯ (ಲೀಷ್ಮಾನಿಯಾಸಿಸ್0 ಆಮಶಂಕೆಯಾಗಿ ಮಲದಲ್ಲಿರುವ ರೋಗದ ಸೂಸುಗೆಯಲ್ಲಿ (ಎಕ್ಸುಡೇಟ್) ಹಲವಾರು ಬಗೆಗಳ ಜೀವಾಣುಗಳು ಹೊರಬೀಳಬಹುದು. ಮೈಯೆಲ್ಲ ಹರಡುವ ಈ ಮುಂಜೀವಿಕ ಸೋಂಕುಗಳ ಲಕ್ಷಣಗಳಲ್ಲಿ ಆಮಶಂಕೆಯೂ ಒಂದು. ಇಲ್ಲಿ ಕರುಳಿನವು ಆ ಲಕ್ಷಣಗಳಲ್ಲಿ ಎಲ್ಲೋ ಒಂದು ಭಾಗ ಮಾತ್ರ. ಆಮಶಂಕೆಯ ಉಚ್ಚಾಟದ ಮಲದಲ್ಲಿ ಸಾಮಾನ್ಯವಾಗಿ, ಕರುಳಿನ ಗಿಯಾರ್ಡ್‍ಜೀವಿ (ಗಿಯಾರ್ಡಿಯ ಇಂಟೆಸ್ಟೈನಾಲಿಸ್) ತೆರನ ಬಗೆಬಗೆಯ ಕೊರಡಾಂಗಿಗಳು (ಫ್ಲಾಜೆಲ್ಲೇಟ್ಸ್) ಕಂಡುಬರುತ್ತವೆ. ಆದರೆ ಇವು ಉಚ್ಚಾಟದ ನಿಜವಾದ ಕಾರಕ ಎನ್ನುವುದು ಅನುಮಾನವೇ ಉಚ್ಚಾಟದ ದೆಸೆಯಿಂದ ಮಾತ್ರ ಇವು ಮಲದಲ್ಲಿ ಹೊರಬೀಳುತ್ತವೆ. ಅಷ್ಟೆ. 
ಚಲ್ಕಣದ ಆಮಶಂಕೆ 

ಕಾರಣಗಳು : ಹಲವಾರು ಬಗೆಗಳ ಚಲ್ಕಣಗಳು ಮಲದಲ್ಲಿ ಕಂಡುಬಂದರೂ, ಚಲ್ಕಣದ (ಅಮೀಬಿಕ್) ಆಮಶಂಕೆಗೆ ಕಾರಣ, ಹೆಗ್ಗರುಳಿಗೆ ನುಗ್ಗಿ ಒಳ ನೆಲೆಸುವ ಊತಕಲಯಕ ಕರುಳ್ಚಲಕಣ. ಮುಖ್ಯವಾಗಿ ಊತಕಗಳಲ್ಲಿ ಇದರ ವಾಸ. ಕರುಳು ಗೋಡೆಯ ಜೀವಕಣದಿಂದಲೇ ಇದಕ್ಕೆ ಪುಷ್ಟಿ ದೊರೆಯಬೇಕು. ರೋಗಿಯಲ್ಲಿ ಹಲವಾರು ಹಂತಗಳಲ್ಲಿ ಕಂಡುಬರುತ್ತದೆ. ಕರುಳಲ್ಲಿ, ಊತಕದ ಒಳ ನುಗ್ಗುವ ಹಂತದಲ್ಲಿನ ಪಾಲಕ ಜೀಕಣ (ಟ್ರೊಫೊಜಾಯ್ಟ್) 20--30 ( ವ್ಯಾಸದ ಗಾತ್ರಕ್ಕಿರುವುದು. ಪುಟಾಣಿಯವು ಇದರ ಅರ್ಧಕ್ಕಿರಬಹುದು. ಇವುಗಳಲ್ಲಿ ವಿಶೇಷ ನಬ್ಬೀಜವೂ (ನ್ಯೂಕ್ಲಿಯಸ್), ಒಳಗೆಲ್ಲ ಕಣಕಣಗಳಾಗೂ, ಅಂಚುಗಳು ಗಾಜುತೆರನಾಗೂ ಇರುವ ವಲಯವಿರುವ, ಇದ್ದಂತಿರದ ಜೀವಿರಸವೂ (ಪ್ರೋಟೊಪ್ಲಾಸ್ಮ್) ಇವೆ. ಈ ಚಲ್ಕಣ ಹುಸಿಗಾಲುಗಳಿಂದ ಚಲಿಸುತ್ತ ಬಹುಮಟ್ಟಿಗೆ ಕೆಂಪು ರಕ್ತಕಣಗಳ, ಊತಕದ ಜೀವಕಣಗಳ ತಿನಿಸನ್ನು ಒಳಸೇರಿಸಿಕೊಳ್ಳುತ್ತದೆ. ಈ ಚಲ್ಕಣವನ್ನು ಹೆಗ್ಗರುಳ ಕರುಳ್ಚಲಕಣದಿಂದ (ಎಂಟಮೀಬ ಕೋಲೈ), ಆರೋಗ್ಯವಂತರ ಕರುಳಲ್ಲೂ ಇದ್ದೇ ಇರುವ ರೋಗಕಾರಕವಲ್ಲದ ಇನ್ನೂ ಮೂರು ಜಾತಿಗಳನ್ನೂ ವ್ಯತ್ಯಾಸ ಕಂಡು ಗುರುತಿಸಬೇಕು. ಇದು ಸುಲಭವಲ್ಲ. ನುರಿತವರಿಂದ ಮಾತ್ರ ಸಾಧ್ಯ. ಅಂಗಗಳ ಊತಕಗಳಲ್ಲಿ ಒಳನುಗ್ಗಲು ನೆರವಾಗುವ ಒಂದು ಊತಕ ಲಯಕವನ್ನು (ಲೈಸಿನ್) ಈ ಚಲ್ಕಣ ಸುರಿಸಿಬಿಡುತ್ತದೆ. ಅಲಸ (ವೆಜಿಟೇಟಿವ್) ಹಂತದಲ್ಲಿ, ಊತಕಗಳಲ್ಲೂ ಅದರಿಂದಾಗುವ ಹುಣ್ಣುಗಳಿಂದ ಸುರಿವ ರಸಗಳಲ್ಲೂ, ಇದರಿಂದಾಗಿ ಚಲ್ಕಣದ ಆಮಶಂಕೆ ಜೋರಾಗಿರುವಾಗ ಮಲದಲ್ಲೂ ಈ ಚಲ್ಕಣಗಳು ಇರುತ್ತವೆ. ಈ ಹಂತದಲ್ಲಿ ಇರುವಾಗ ಮಾತ್ರ ಇದನ್ನು ಒಣಗಿಸಿದರೆ, ಜಠರದ ರಸ ತಾಕಿದರೆ ಸುಲಭವಾಗಿ ಸಾಯುತ್ತದೆ. ಆದುದರಿಂದಲೇ ಬೇರೆಯವರಿಗೆ ಹೊಸ ಸೋಂಕು ಇದರಿಂದ ತಾಕುವಂತಿಲ್ಲ. ಆಮಶಂಕೆ ಜೋರು ಇಳಿದಿರುವಾಗ, ಚಲ್ಕಣ ಊತಕಗಳನ್ನು ಬಿಟ್ಟು ಕರುಳಿನ ನಾಳದೊಳಕ್ಕೆ ಬೀಳುತ್ತದೆ. ಇನ್ನೂ ಸಣ್ಣಗೆ ದುಂಡಾಗಿ, ಅಲುಗಾಡದೆ ಬಿದ್ದಿದ್ದು, ರಸ ಸುರಿಸಿ ತಂತಾನು ಕಾಪಿಟ್ಟುಕೊಳ್ಳುವ ಕವಚ ಕಟ್ಟಿಕೊಂಡು ಜಿಟ್ಟಿ (ಸಿಸ್ಟ್) ಆಗುತ್ತದೆ. ಮೊದಲು ಇದರಲ್ಲಿ ಒಂಟಿ ನಬ್ಬೀಜ (ನ್ಯೂಕ್ಲಿಯಸ್), ಆಯೊಡೀನಿನಿಂದ ಕಂದುಬಣ್ಣ ತಳೆವ ದೊಡ್ಡ ಮಿಗದಿಟ್ಟಿನ (ಗ್ಲೈಕೊಜನ್) ಮುದ್ದೆ, ಸಾಮಾನ್ಯವಾಗಿ ದಟ್ರಂಗಿತೆರ (ಕ್ರೊಮೆಟಾಯ್ಡ್) ವಸ್ತುಗಳು ಎಂಬ ಗಾಜುತೆರನ ಕಡ್ಡಿಗಳೂ (ಹಯಲೀನ್ ರಾಡ್ಸ್) ಇರುವುವು. ಜಿಟ್ಟಿ ಬಲಿತಂತೆಲ್ಲ ನಬ್ಬೀಜ ಎರಡಾಗಿ ನಾಲ್ಕಾಗುತ್ತದೆ. ಮಿಗದಿಟ್ಟಿನ ಮುದ್ದೆ, ದಟ್ರಂಗಿತೆರನ ವಸ್ತುಗಳೂ ಬರುಬರುತ್ತ ಕಾಣೆಯಾಗುತ್ತವೆ. ಮಲದಲ್ಲಿ ಹೊರಬೀಳುವ ಜಿಟ್ಟಿಯನ್ನು ಒಣಗಿಸಿದರೂ ಸಾಯದು. ಬೇರೆ ತೆರನ ಕೆಡುಕುಗಳನ್ನೂ ತಡೆದುಕೊಳ್ಳುತ್ತದೆ. ಸೊಂಕು ಹತ್ತಿರುವ ನೀರು, ಉಣಿಸುಗಳ ಮೂಲಕ ಇದು ಇನ್ನೊಬ್ಬರ ಹೊಟ್ಟೆಗೆ ಸೇರಿದ ಮೇಲೆ, ಜಠರದಲ್ಲಿ ಇದಕ್ಕೆ ಏನೂ ತೊಂದರೆ ಆಗದೆ ಕರಳನ್ನು ಸೇರುತ್ತದೆ. ಆಮೇಲೆ ಇದೇ ಒಂಟಿ ನಬ್ಬೀಜವಿರುವ ನಾಲ್ಕು ಬೇರೆ ಬೇರೆ ಚಲ್ಕಣಗಳಾಗುತ್ತದೆ. ಇವೆಲ್ಲ ಮತ್ತೆ ಕರುಳಿನ ಲೋಳೆಪರೆಗೆ ತೂರಿ ನೆಲಸಿ ಹೊರ ಸೊಂಕನ್ನು ಹತ್ತಿಸುತ್ತವೆ. ಆದ್ದರಿಂದ, ಆಮಶಂಕೆ ಜೋರಾಗಿ ಇರುವಾಗ ಸೋಂಕು ಇತರರಿಗೆ ಹರಡುವುದಿಲ್ಲ. ಆದರೆ, ಎಷ್ಟೋ ವೇಳೆ ರೋಗ ಲಕ್ಷಣಗಳೇ ಕಂಡುಬರದ ಬೇರೂರಿದ ಸೊಂಕಿನ ರೋಗಿಯೇ ಸದ್ದಿಲ್ಲದೆ ಸೊಂಕು ಹರಡುವುದರಲ್ಲಿ ಇನ್ನೂ ಹೆಚ್ಚು ಅಪಾಯಕಾರಿ. ಮಲದಲ್ಲಿ ಎಂದಿಗೂ ಇರುವ ಏಕಾಣುಜೀವಿಕೋಟಿಯೂ (ಬ್ಯಾಕ್ಟೀರಿಯಲ್ ಫ್ಲೋರ) ಮಲದ ರಾಸಾಯನಿಕ ಸಂಯೋಗವೂ, ವಲ್ಕಣಗಳು ಕರುಳುಗಳ ಗೋಡೆಗಳಲ್ಲಿ ತಳವೂರುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆಂಬ ಸೂಚನೆಯೂ ಇದೆ. ಚಲ್ಕಣದ ಆಮಶಂಕೆ ಆಂಟಿತೋ ಇಲ್ಲವೆನ್ನುವಷ್ಟಾಗೋ ವಿಪರೀತ ಕಟ್ಟುನಿಟ್ಟಾಗೋ ಇರಬಹುದು. ಹೀಗೆ ಬಂದು ಹಾಗೆ ಹೋಗಿ ಬಿಡಬಹುದು. ಇಲ್ಲವೆ ಕೆಲವು ವರ್ಷಗಳು ನರಳಿಸಬಹುದು. ಇದು ಬರುವುದರಲ್ಲೂ ಎರಡು ಮುಖ್ಯ ಬಗೆಗಳನ್ನು ಗುರುತಿಸಬಹುದು. ಮೈಗೇನೂ ಅಷ್ಟಾಗಿ ಇರಸು ಮುರಸಾಗದೆ, ಸುಮ್ಮನೆ ಭೇದಿ ಆಗುತ್ತ ಕಂಡೂ ಕಾಣದಂತೆ ಬರುವುದು ಒಂದು ಬಗೆ. ಇನ್ನೂ ಬೇಗನೆ, ಹೊಟ್ಟೆನೋವು, ಶೂಲೆಗಳೊಂದಿಗೆ, ರಕ್ತ ಬೆರೆತ ಆಮಿನ ಮಲ ಹೋಗುವುದು ಇನ್ನೊಂದು ಬಗೆ. ಸರಕ್ಕನೆ ಜೋರಾಗುವುದು ಅಪೂರ್ವ. ದಿನಕ್ಕೆ 3-4 ಬಾರಿ ಮಲ ಕಳೆಯಬಹುದು ಅಷ್ಟೆ. ಹೊಟ್ಟೆ ನುಲಿತ, ತಡೆಯಿಲ್ಲದ ಉಚ್ಚಾಟಗಳು ಆಗುವುದು ಬಲು ಅಪೂರ್ವ. ಬೇರೂರಿ ಬಹಳ ಕಾಲ ತರುವುದೇ ಸಾಮಾನ್ಯ. ಹೊಟ್ಟೆಯಲ್ಲಿ ಸಮಾಧಾನ ಇಲ್ಲದಂತಾಗಿ, ಆಗಾಗ್ಗೆ ಬರುವುದು, ಹೆಚ್ಚುವುದು, ಹೋಗುವುದು ಹೀಗೆ ನಡೆಯುತ್ತಿರುವುದು. ಎಡ ಬಲ ಕೆಳ ಹೊಟ್ಟೆಗಳಲ್ಲಿ ಮುಟ್ಟಿದರೆ ನೋವೂ, ಅಲ್ಲಿನ ಹೆಗ್ಗರುಳಿನ ಭಾಗ ಗಡುಸಾಗೂ ಇರುವುದು ಸಾಮಾನ್ಯ. ಏಕಾಣುಜೀವಿಕ ಆಮಶಂಕೆಯಲ್ಲಿನ ಮಲಕ್ಕಿಂತಲೂ ಇದರದು ದುರ್ನಾತ ಬಡಿಯುತ್ತದೆ. ಮಲದ ತುಂಬ ಬದಲಾದ ರಕ್ತ ಬೆರೆತಿರುವುದು. ಬರುಬರುತ್ತ ಇನ್ನೂ ಕಪ್ಪಾಗುತ್ತ ನೀರುನೀರಾಗಿರುವುದು. ಬೇನೆ ತೆಪ್ಪಗಿರುವಾಗ, ಗರಣೆಗಟ್ಟಿದ ರಕ್ತ, ಲೋಳೆಗಳೊಂದಿಗೆ ಗಟ್ಟಿಯಾದ ಮಲ ಹೊರಬೀಳಬಹುದು. ಜ್ವರ ಇಲ್ಲದಿದ್ದರೂ, ಓಕರಿಕೆ ಮಾತ್ರ ಇರಬಹುದು. ವಾಂತಿ ಆಗದು. ಆಮಶಂಕೆಯ ಪರಪಿಂಡಿ ಚಲ್ಕಣದ ಚಟುವಟಿಕೆಯಿಂದ ರೋಗವನ್ನು ತಡೆವ ಮೈಯಿನ ಚೇತರಿಕ ಬಲ ಹೆಚ್ಚುವುದರಿಂದ, ಆಮಶಂಕೆ ಬರುಬರುತ್ತ ವಾಸಿಯಾಗುತ್ತ ಬರುತ್ತದೆ. ಅಪೂರ್ವವಾಗಿ ಹುಣ್ಣುಗಳ ಮೇಲೆ ಮರುಚಲದ ಸೊಂಕು ಅಂಟಿದಾಗ ಜ್ವರ ಬಂದು ರಕ್ತ ವಿಷವೇರಬಹುದು. ದೊಡ್ಡ ಕರುಳಿನ ಹುಣ್ಣಿನಲ್ಲಿ ತೂತು ಬಿದ್ದು, ಹೊರ ಬಿಗಿ ಪರೆಯುರಿತವಾಗೋ (ಪೆರಿಟೊನೈಟಿಸ್), ಕರುಳಿಂದ ಬಹಳ ರಕ್ತ ಸುರಿದೋ, ಅದರಲ್ಲೂ ಹೆಗ್ಗರುಳು ಬಾಗುವೆಗಳಲ್ಲಿ (ಫ್ಲೆಕ್ಸರ್ಸ್) ಕರುಳು ಕೊಳೆತೋ ರೋಗಿ ಸಾಯಬಹುದು.

ನಿದಾನ : ರೋಗಿ ತಿಳಿಸಿದ ವಿಚಾರಗಳು, ಮಲದ ಕಣ್ಣರಿಕೆಗಳೊಂದಿಗೆ, ಮಲದ ಪರೀಕ್ಷೆಯಲ್ಲಿ ಇದರ ಕರುಳ್ಚಲಕಣವನ್ನು ಸರಿಯಾಗಿ ಗುರುತಿಸಿ ಕಾಣಲೇ ಬೇಕು. ರೋಗ ಜೋರಾಗಿರುವಾಗ ಇವನ್ನು ಗುರುತಿಸುವದು ಬಹುಮಟ್ಟಿಗೆ ಸುಲಭ. ಊತಕದಲ್ಲಿ ಒಳ ನುಗ್ಗುವ, ಕೆಂಪು ರಕ್ತಕಣಗಳನ್ನು ನುಂಗಿರುವ, ಚುರುಕಿನ ದೊಡ್ಡ ಪಾಲಕಜೀಕಣಗಳು ಕಾಣಸಿಗುತ್ತವೆ. ಮಲದಲ್ಲೆಲ್ಲ ಇವು ಇರವು. ರಕ್ತ, ಆಮು ಇರುವೆಡೆಯಲ್ಲಿ ಮಾತ್ರ ಹುಡುಕಬೇಕು. ಮಲ ಬಿದ್ದ ಕೂಡಲೇ ತಂದು ಪರೀಕ್ಷಿಸಿದರೆ ಮಾತ್ರ ಕಾಣುವುವು. ಆಮೇಲೆ ಇಲ್ಲ. ಮೂಗರುಳು (ಸೀಕಂ), ಹೆಗ್ಗುರುಳಿನ ಬಾಗುವೆಗಳು, ನೆಟ್ಟಗರುಳೂ (ರೆಕ್ಟಂ) ಚಲ್ಕಣದ ಹುಣ್ಣುಗಳು ಏಳುವ ಮುಖ್ಯ ಜಾಗಗಳು. ಮಲದಲ್ಲಿ ಸುಲಭವಾಗಿ ಕಾಣಸಿಗದಿದ್ದರೆ, ಇನ್ನೂ ಖಚಿತವಾಗಿ, ದೊಡ್ಡ ಕರುಳಿನ ಕೆಳಕೊನೆಯ ಭಾಗಗಳಾದ ನೆಟ್ಟಗರುಳು, ಇಬ್ಬಂಕದ (ಸಿಗ್ಮಾಯ್ಡ್) ಒಳಗೆ ಬೆಳಕು ಬಿಟ್ಟು, ನೆಟ್ಟಗರಳುಗಳ ದರ್ಶಕ (ಪ್ರಾಕ್ಟೊಸ್ಕೋಪ್) ಇಲ್ಲವೇ ಇಬ್ಬಂಕ ದರ್ಶಕ (ಸಿಗ್ಮಾಯ್ಡೊಸ್ಕೋಪ್) ಮೂಲಕ ಹೆಗ್ಗುರುಳಿನ ಲೋಳೆಪರೆಗಳನ್ನು ಕೆರೆಯುವ ಒಂದು ವಿಶೇಷ (ವೋಕ್‍ಮಾನನ) ಚಮಚದಿಂದ ಕೆರೆದು ಬಂದುದನ್ನು ನೇರವಾಗಿ ಪರೀಕ್ಷಿಸಬಹುದು. ಆಮಶಂಕೆ ಬೇರೂರಿರುವಾಗ, ಭೇದಿಯ ಮಲದಲ್ಲಿ ಜಿಟ್ಟಿಗಳನ್ನು ಕಾಣಬಹುದು. ಆಗ ಅವು ಹೇರಳವಾಗಿರುತ್ತವೆ. ಆದರೆ ಒಂದು ದಿವಸ ಇದ್ದಂತೆ ಇನ್ನೊಂದು ದಿವಸ ಇರವು. ಎಷ್ಟೋ ದಿವಸಗಳು ನೋಡಬೇಕೆಂದರೆ ಒಂದೂ ಕಾಣದಿರಬಹುದು. ನೆಟ್ಟಗರುಳದರ್ಶಕದಿಂದ ಆಮಶಂಕೆಯ ವಿಶಿಷ್ಟ ಹುಣ್ಣುಗಳನ್ನು ಕಣ್ಣಿನಿಂದ ನೋಡಬಹುದು. ಕೆಲವೇಳೆ ಈ ಹುಣ್ಣುಗಳು ಸಣ್ಣಗೆ ಮೆಲ್ಮೇಲೇ ಇರುತ್ತವೆ. ಅಲ್ಲಲ್ಲಿ ಲೋಳೆಪರೆಯಡಿ (ಸಬ್ಬಮೂಕಸ್) ಚಿಕ್ಕದಾಗಿ ರಕ್ತ ಸುರಿಕೆಗಳು ಆಗಿರಬಹುದು. ಬೇರೂರಿದ ಹಂತದಲ್ಲಿ ಇವು ಹಳ್ಳತಗ್ಗುಗಳಾಗಿ ಹಂದಿ ಚಕ್ಕಳದಂತೆ ಕಾಣಬಹುದು. ಅಂತೂ ಯಾವಾಗಲೂ ಗುದದ ಆಳದಲ್ಲೇ ಆಮಶಂಕೆ ಹುಣ್ಣುಗಳು ಸುಲಭವಾಗಿ ಕಾಣುತ್ತವೆ. ಸರಳವಾದ ನೆಟ್ಟಗರುಳದರ್ಶಕದಿಂದಲೇ ತೋರಿಬರುವುವು, ಏಕಾಣುಜೀವಿಕ ಆಮಶಂಕೆ, ವಿಶಿಷ್ಟವಲ್ಲದ ಹುಣ್ಣಾಗುವ ಹೆಗ್ಗರುಳುರಿತ, ಏಡಿಗಂತಿಗಳು (ಕ್ಯಾನ್ಸರ್ಸ್), ಆಹಾರನಾಳದಲ್ಲಿನ ಕ್ಷಯ ಮುಂತಾದ ಸೊಂಕು ರೋಗಗಳನ್ನು, ಚಲ್ಕಣದ ಆಮಶಂಕೆಯಿಂದ ಬೇರೆಯಾಗಿ ಎಚ್ಚರದಿಂದ ಗುರುತಿಸಬೇಕಾಗುತ್ತದೆ. 

ಹೆಗ್ಗುರುಳಲ್ಲಿ ಆಗಾಗ್ಗೆ ಚಲ್ಕಣಗಂತಿಯೋ (ಅಮೀಬೋಮ) ಏಡಿಗಂತಿಯನ್ನೋ ಹೋಲುವ ಹುಲುಸು ಬೆಳೆವ ದೊಡ್ಡ ಹುಣ್ಣೋ ಆಗಬಹುದು. ಆಮಶಂಕೆಯ ಲಕ್ಷಣಗಳೊಂದಿಗೆ ಏಡಿಗಂತಿ ಆಗಿರುವಾಗ ಕೇವಲ ಚಲ್ಕಣಗಂತಿಯೆಂದು ತಿಳಿಯುವುದು ಇನ್ನೂ ಕೆಡಕು, ಅಪಾಯಕರ. ಪರಿಣತ ವೈದ್ಯ ವಿಧಾನ ಎಷ್ಟು ಮುಖ್ಯವೆಂದು ಇದರಿಂದ ತಿಳಿಯುತ್ತದೆ.

 	ತಾಕುತೊಡಕುಗಳು: ಚಲ್ಕಣದ ಆಮಶಂಕೆ ವರ್ಷವೊ ಹೆಚ್ಚು ಕಾಲವೊ ಒಳಗೇ ಅಣಗಿ ಅಡಗಿರಬಹುದು. ರಕ್ತನಾಳಗಳ ಒಳ ನುಗ್ಗಿದ ಚಲ್ಕಣಗಳು ಕೆಲವೇಳೆ ಈಲಿಗೆ (ಲಿವರ್) ಸಾಗಿ ಹೋಗಿ, ಸಣ್ಣ ಸಣ್ಣ ಚಲ್ಕಣದ ಕುರುಗಳು ಏಳಬಹುದು. ರೂಢಿಯಲ್ಲಿ ಇದನ್ನು ಚಲ್ಕಣದ ಈಲಿಯುರಿತ (ಹೆಪೆಟೈಟಿಸ್) ಎನ್ನುವದುಂಟು. ಈ ಕುರುಗಳು ಬರುಬರುತ್ತ ಬೆಳೆದು ಒಂದಾಗಿ ಈಲಿಯ ಚಲ್ಕಣದ ದೊಡ್ಡ ಕುರು ಆಗುತ್ತದೆ. ಅಕ್ಕ ಪಕ್ಕದ ಅಂಗಗಳೊಳಕ್ಕೆ ಇದು ಒಡೆದುಕೊಂಡು ಸೊಂಕನ್ನು ಹರಡಬಹುದು. ವಪೆಯ ಮೂಲಕ ಪುಪ್ಪಸದೊಳಕ್ಕೆ ಒಡೆದುಕೊಂಡು, ಪುಪ್ಪಸದ ಮರುಚಲದ (ಸೆಕೆಂಡರಿ) ಚಲ್ಕಣಬೇನೆ ಹತ್ತಬಹುದು. ಮೈಯಲ್ಲಿ ಮಿದುಳು, ತೊರಳೆ (ಸ್ಪ್ಲೀನ್) ಇತ್ಯಾದಿ ಅಂಗಗಳಲ್ಲೂ ಈ ತೆರನ ಕುರುಗಳು ಏಳಬಹುದಾದರೂ ಹಾಗಾಗುವುದು ಬಲು ಅಪೂರ್ವ. ತಡ್ಡಿನಲ್ಲಿರುವ (ಟೆಸ್ಟಿಸ್) ತಡ್ಡು ಮೇಲ್ನಾಳದಲ್ಲಿ (ಎಪಿಡಿಡೈಮಿಸ್) ಕುರು ಎದ್ದ ವರದಿಯಿದೆ. ಒಂದೊಂದು ಬಾರಿ ಕುರುಗಳಿಂದಲೋ, ಈಲಿಯಿಂದಲೋ ಗುದದ ಇಲ್ಲವೇ ಶಸ್ತ್ರ ಕ್ರಿಯೆಯ ಗಾಯದ ಹುಣ್ಣಿನ ಸುತ್ತಣ ಚರ್ಮಕ್ಕೆ ಚಲ್ಕಣದ ಸೊಂಕು ತಗುಲಿ ಹುಣ್ಣಾಗಬಹುದು. ಆಗ ಪಿರ್ರೆಗಳಲ್ಲಿ ಬೊರಿಗೆಗಳು (ಫಿಸ್ಟುಲಾಸ್), ಗುದದ ಸುತ್ತ ಚಲ್ಕಣದ ಹುಣ್ಣುಗಳೂ ಕುರುಗಳೂ, ಹೆಂಗಸಿನಲ್ಲಿ ಗರ್ಭಗೊರಳಲ್ಲೂ (ಸರ್ವಿಕ್ಸ್) ಅದೇ ತೆರನವೂ ಏಳಬಹುದು. ಚಲ್ಕಣದ ಆಮಶಂಕೆಯ ಚಿಕಿತ್ಸೆ ಆಗದಿದ್ದಲ್ಲಿ ಎಷ್ಟು ಮಾಸಗಳು ಕಳೆದರೂ ಆ ಹುಣ್ಣುಗಳು ವಾಸಿಯಾಗದೆ, ಚಲ್ಕಣಗಳು ತುಂಬಿದ ಗೋಚಿನ (ಸ್ಕಫ್) ಚರ್ಮವಾಗಬಹುದು. ಕೆಲವು ವೇಳೆ, ಎಂದೂ ಚಲ್ಕಣದ ಆಮಶಂಕೆ ಅನುಭವಿಸದಿದ್ದವರಲ್ಲೂ, ಮಲದಲ್ಲಿ ಮಾತ್ರ ಊತಕಲಯಕ ಕರುಳ್ಜಲಕಣಗಳು ಇದ್ದಲ್ಲಿ ಕೂಡ ಹೀಗಾಗಬಹುದು. 
 
	ಚಿಕಿತ್ಸೆ : ಸಾಮಾನ್ಯ ಬಳಕೆಯಲ್ಲಿರುವ ಚಲ್ಕಣಮಾರಕ (ಅಮೀಬಿಸೈಡಲ್) ಮದ್ದುಗಳು ಮೂರು ಬಗೆಯವು; ಎಮಿಟೀನ್ ಹೈಡ್ರೊಕ್ಲೋರೈಡು, ಎಮಿಟೀನ್ ಬಿಸ್ಮತ್ ಅಯೊಡೈಡು ತೆರನ ಸಂಯುಕ್ತಗಳು; ಡಯೊಡೊಕ್ವಿನ್ ತೆರನ (ಚಿನಿಯೊಫಾನ್) ಅಯೊಡಾಕ್ಸಿಕ್ವಿನೊಲೀನ್ ಸಂಯುಕ್ತಗಳು; ಕಾರ್ಬಾರ್ಸೋನ್ ತೆರನ ಬದಲಿ ಜೋಡಿಸಿದ ಫಿನೈಲ್ ಅರ್ಸೋನೇಟುಗಳು. ಅನೇಕರು ಇವುಗಳಲ್ಲಿ ಒಂದೆರಡನ್ನು ಒಟ್ಟಿಗೇ ಕೊಡುವರು. ಈ ಬಗೆಯ ಒಂದು ಜೋಡಿಯಾಗಿ, ದಿನವೂ ರಾತ್ರಿ ಹೊತ್ತು ಎಮಿಟೀನ್ ಬಿಸ್ಮತ್ ಅಯೊಡೈಡನ್ನು, 10-12 ದಿವಸಗಳು ನುಂಗಿಸಿ, ಬೆಳಗಿನ ಹೊತ್ತು ಡಯೊಡೊಕ್ವಿನ್ 2.5%ರ ದ್ರಾವಣವನ್ನು ಗುದದ ಮೂಲಕ ವಸ್ತಿಯಾಗಿ (ಎನೀಮ) ನಿಧಾನವಾಗಿ ತೊಟ್ಟಿಡುವಂತೆ ಒಳಬಿಟ್ಟು 4-5 ತಾಸುಗಳು ಇರಿಸಬೇಕು. ವಸ್ತಿಕೊಡುವ ಮುನ್ನ ಕರುಳಲ್ಲಿ ಅಲ್ಲಿರುವ ಅಮನ್ನೆಲ್ಲ ತೆಗೆದು ಚೊಕ್ಕಗೊಳಿಸಲು ಶೇಕಡ ಒಂದರ ಅಡುಗೆ ಸೋಡದ ಕ್ಷಾರದ ದ್ರಾವಣದಿಂದ ತೊಳೆವುದುಂಟು. ಇದಾದ ಮೇಲೆ ಬೆಳಗು, ಸಂಜೆಯಲ್ಲಿ ಕಾರ್ಬಾರ್ಸೋನ್ ಮಾತ್ರೆಗಳನ್ನು ಇನ್ನೂ 10 ದಿವಸಗಳು ಕೊಡುವುದುಂಟು. ಜೋರಾಗಿರುವ ರೋಗವನ್ನು ಬೇಗನೆ ತಗ್ಗಿಸಲು, ಕೆಲವು ದಿವಸಗಳು ಎಮಿಟೀನ್ ಹೈಡ್ರೊಕ್ಲೋರೈಡನ್ನು ದಿವಸವೂ ಚರ್ಮದಡಿಯ ಚುಚ್ಚುಗೆಯಾಗಿ ಕೊಡಬಹುದು. ಕೂಡಲೆ ನೋವು, ಆಮಶಂಕೆ ಭೇದಿಗಳನ್ನು ಚೆನ್ನಾಗಿ ತಡೆಗಟ್ಟಿದರೂ, ಇದು ಸೊಂಕನ್ನು ಮಾತ್ರ ಹೋಗಲಾಡಿಸದು. ಊತಕಲಯಕ ಕರುಳ್ಜಲಕಣಗಳ ಜಿಟ್ಟಿಗಳಂತೂ ಇದಕ್ಕೆ ಏನೇನೂ ಜಗ್ಗವು. ಆಮೇಲೆ ಉಳಿದ ಪೂರಕ ಚಿಕಿತ್ಸೆ ಆಗಬೇಕು. ಈಲಿ ಮತ್ತಿತರ ಅಂಗಗಳ ಚಲ್ಕಣ ಬೇನೆ ಕಾಣಿಸಿಕೊಂಡಾಗ ಕೂಡ ಎಮಿಟೀನ್ ಚುಚ್ಚುಗೆಯನ್ನು 8-10 ದಿವಸಗಳು ಕೊಡಬೇಕಾಗುತ್ತದೆ. ಅದೇ ಹೊತ್ತಿನಲ್ಲಿ ಕರುಳಿನ ಸೊಂಕಿನ ಚಿಕಿತ್ಸೆಯನ್ನು ಮುಂದುವರಿಸಬೇಕು. ಇಲ್ಲವಾದಲ್ಲಿ ಆಮಶಂಕೆ ಮರುಕಳಿಸಬಹುದು. ಎಮಿಟೀನಿಂದ ಗುಂಡಿಗೆ ಸ್ನಾಯುವಿಗೆ ಬಲು ಕೆಡಕಾಗಬಹುದು; ರೋಗಿಗೆ ನಿತ್ರಾಣ ಆಗುವುದರಿಂದ ಇದನ್ನು ಚುಚ್ಚಿಸಿಕೊಳ್ಳುವ ದಿವಸಗಳಾದರೂ ರೋಗಿ ಹಾಸಿಗೆಯಲ್ಲಿ ಮಲಗಿರಬೇಕು. ಚಲ್ಕಣದ ಸೊಂಕನ್ನು ಹಾಗೇ ಉಳಿಸಿರುವುದರಲ್ಲಿ ಕರುಳಲ್ಲಿರುವ ಏಕಾಣು ಜೀವಿಗಳ ಪಾತ್ರವೂ ಇರುವುದರಿಂದ ಆಮಶಂಕೆ ಹುಣ್ಣುಗಳು ಬಹಳವಾಗಿ ಬಿಟ್ಟು ಮರುಚಲದ ಸೊಂಕೂ ಹತ್ತಿರುವಾಗ, ಪೆನೆಸಿಲಿನ್ನುಗಳನ್ನೊ ಸಲ್ಫೋನೇಮೈಡು ಮದ್ದುಗಳನ್ನೊ ಕೊಡಬೇಕಾಗುತ್ತದೆ. ಏಕಾಣು ಜೀವಿಕ ಆಮಶಂಕೆಯಲ್ಲಿ ಇದ್ದ ಹಾಗೆ, ಇಲ್ಲೂ ರೋಗಿಯ ಆಹಾರ, ಆರೈಕೆಗಳು ಆಗಬೇಕು.

ಮುಂಜೀವಿಕ ಆಮಶಂಕೆಯಲ್ಲಿ ಚಲ್ಕಣದ ಆಮಶಂಕೆಯೇ ಬಲು ಸಾಮಾನ್ಯವಾದರೂ ಬೇರೆ ರೋಗಾಣುಗಳೂ ಕೆಲವೇಳೆ ಅಪೂರ್ವವಾಗಿ ಕಾಣಿಸಿಕೊಳ್ಳುತ್ತವೆ. ವಿಷಮ ಮೂರ್ದಿನದ (ಮೆಲಿಗ್ನೆಂಟ್ ಟರ್ಷಿಯನ್) ಮಲೇರಿಯದಲ್ಲೂ ಒಳಾಂಗದ ಲೀಷ್ಮನ್ ಬೇನೆಯಲ್ಲೂ (ಲೀಷ್ಮಾನಿ ಯಾಸಿಸ್) ಆಮಶಂಕೆ ಆಗಬಹುದು. ಈ ರೋಗಗಳ ಎಂದಿನ ಚಿಕಿತ್ಸೆ ಚೆನ್ನಾದರೆ, ಆಮಶಂಕೆಯೂ ಕಳೆದ ಹಾಗೆ ಅಪೂರ್ವವಾಗಿ ಬಾಸೆಗವಾದ (ಫ್ಲಾಜೆಲ್ಲೇಟ್) ಬ್ಯಾಲಾಂಟಿಡಿಯಂ ಕೋಲೈ ಕೂಡ ಕಾರಣವಾಗಬಹುದು. ಹಂದಿಗಳಿಂದ ಮಾನವನಿಗೆ ಅಂಟಿದರೂ ಮಾನವ ರೋಗಿಯಲ್ಲಿ ಜಿಟ್ಟಿ ಆಗದುದರಿಂದ, ಮಾನವ ಇದರ ಹೊರುಗನಾಗಿ (ಕ್ಯಾರಿಯರ್) ಇತರರಿಗೆ ಸೊಂಕು ಹರಡಲಾರ. ಈ ಬೇನೆಗಾಗಿ ಬೇರೆ ಬೇರೆ ಮದ್ದುಗಳನ್ನು ಕೊಡುವುದಾದರೂ ಬಾಯಿ ಮೂಲಕ ಕಾರ್ಬಾರ್ಸೋನ್ ಕೊಟ್ಟರೂ ಸಾಕಾಗುವದು.
 
ಡಯೊಡೊಕ್ವಿನ್ನಿನಿಂದ ಜಿಟ್ಟಿಗಳ ಹೊರುಗರ ಚಿಕಿತ್ಸೆ ಚೆನ್ನಾಗುವುದು. ಮುಂಜೀವಿಕ ಆಮಶಂಕೆಗಳ ಚಿಕಿತ್ಸೆಯಲ್ಲಿ ವಿಶಿಷ್ಟವಾಗಿ ಬಳಸುವ ಉಳಿದ ಮದ್ದುಗಳು, ಮೆಪಕ್ರೀನ್ (ಅಟಬ್ರೀನ್), ಗಿಯಾರ್ಡಬೇನೆಗೂ ಚಲ್ಕಣದ ಆಮಶಂಕೆಗೂ ಕ್ಲೋರೊಕ್ವಿನ್, ಮಲೇರಿಯದ ಆಮಶಂಕೆಗೆ ಪಾಲುಡ್ರೀನ್, ಲೀಷ್ಮನ್‍ಬೇನೆಗೆ ನಿಯೊಸ್ಟಿಬೊಸಾನ್, ಬಿಲ್ಹಾರ್ಜ್‍ಬೇನೆಯಲ್ಲಿ ಸೋಡಿಯಂ ಸುರಮಾ ಟಾರ್ಟರೇಟು. 

ಕರಳುಹುಳುವಿನ ಆಮಶಂಕೆ 

ಕಾಳ ಜ್ವರದ (ಕಾಲಾ ಅಜಾರ್) ಪರಪಿಂಡಿಯಿಂದ (ಲೀಷ್ಮಾನಿಯ ಡೊನೊವಾನಿ) ಕರುಳಿನಲ್ಲಿ ಸೊಂಕಾದರೆ ಲೀಷ್ಮನ್ ಬೇನೆಯ ಆಮಶಂಕೆಯಾಗಿ ಮಲದಲ್ಲಿ ರೋಗದ ಸೋಸುಗೆಯಲ್ಲಿ (ಎಕ್ಸುಡೇಟ್) ಹಲವಾರು ಬಗೆಗಳ ಜೀವಾಣುಗಳು ಹೊರಬೀಳಬಹುದು. ಆಫ್ರಿಕಾ, ದಕ್ಷಿಣ ಅಮೆರಿಕಗಳಲ್ಲಿ ಮ್ಯಾನ್ಸನ್ನನ ಸೀಳೊಡಲಿಯೂ (ಷಿಸ್ಟೊಸೋಮ ಮಾನ್ಸೊನಿ), ಜಪಾನಿನ ಸೀಳೊಡಲಿಯೂ (ಷಿ.ಜಪಾನಿಕಂ), ಕರುಳಿನ ಸೀಳೊಡಲಿಯ ಸೊಂಕಿಗೆ (ಸೀಲೊಡಲಿ ಬೇನೆ, ಬಿಲ್ಹಾರ್ಜಬೇನೆ) ಸಾಮಾನ್ಯ ಕಾರಕಗಳು. ರಕ್ತಜೀವಿ ಸೀಳೊಡಲಿಯಿಂದ (ಷಿ.ಹೆಮೆಟೋಬಿಯಂ) ಸಾಮಾನ್ಯವಾಗಿ ಮೂತ್ರಾಂಗಗಳ ಸೀಳೊಡಲಿಯಿಂದ (ಷಿಸ್ಟೊಸೋಮಿಯಾಸಿಸ್) ಆಗುವುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಕರುಳಿಗೂ ಹತ್ತಿ ಆಮಶಂಕೆ ಆಗಬಹುದು. ಮಾನವನಿಗೆ ಸೊಂಕು ಹತ್ತಿಸುವುದರ ನಡುವೆ ಬಸವನ ಹುಳುವಿನಲ್ಲಿ ಇವು ಬೆಳೆಯುತ್ತವೆ.
ರೋಗ ವಿಧಾನ: ಬೆಳೆದ ಸೀಳೊಡಲಿಗಳಿಂದ ಮೈಗೆ ತೊಂದರೆಯಿಲ್ಲ. ಆದರೆ ಅವುಗಳ ಅಂಡಾಣುಗಳು (ಓವ) ಮಾತ್ರ ಕರುಳಿನ ಲೋಳೆ ಪರೆ ವೆಗ್ಗಳಿಸುವಂತೆ (ಪ್ರೊಲಿಫರೇಟ್) ಮಾಡುತ್ತದೆ. ಊತುಕಗಳಲ್ಲಿ ಇವು ಇರುವೆಡೆಯಲ್ಲೆಲ್ಲ ಕಿಗ್ಗಂಟು ಬೆಳೆಯುತ್ತವೆ. ಇದರಿಂದ ಕರುಳಲ್ಲಿ ಎಲ್ಲೆಲ್ಲೂ ಕುರು, ರಕ್ತ ಸುರಿಕೆ, ಹುಣ್ಣುಗಳೂ ಆಗುತ್ತವೆ. ರೋಗ ಇನ್ನೂ ಬೇರೂರಿದ್ದರೆ, ಕರುಳಿನ ಗೋಡೆ ದಪ್ಪವಾಗಿ, ಗಂತಿಗಳು ಬೆಳೆದು ಕೊನೆಗೆ ವಿಷಮ (ಮೆಲಿಗ್ನೆಂಟ್) ಗಂತಿಗಳೂ ಆಗಬಹುದು. ಈಲಿಯಲ್ಲಿ (ಲಿವರ್) ಹುಸಿಗಂಟುಗಳಾಗಿ ಕೊನೆಗೆ ಅರಿಶಿನಾರಿಗೆ (ಸಿರ್ರೋಸಿಸ್) ತೆರನಾಗಿ ಬದಲಾಗಬಹುದು. ಮಲದಲ್ಲಿ ಆಮು, ರಕ್ತಗಳೊಂದಿಗೆ ಇದರದೇ ಅಂಡಾಣುಗಳಿರುತ್ತವೆ. 

ಲಕ್ಷಣಗಳು: ಈ ಹುಳುಗಳ ಮರಿಗಳಾದ ಬಾಲಗೂದಲಿಗಳು (ಸರ್ಕೇರಿಯ) ಚರ್ಮದಲ್ಲಿ ತೂರುವ ಕಾಲದಲ್ಲಿ ತುರುಚೆ ದದ್ದಿನ ತೆರನ ಬಗೆಬಗೆಯ ಒಗ್ಗದಿಕೆಯ (ಅಲರ್ಜಿಕ್) ಲಕ್ಷಣಗಳು ತೋರಬಹುದು. ಇವು ಮೈಯಲ್ಲೆಲ್ಲ ಹರಡಿ, ಆಮೇಲೆ ತಾವಿನ (ಲೋಕಲ್) ಲಕ್ಷಣಗಳೇ ಎದ್ದು ಕಾಣುತ್ತವೆ. ಈಲಿ, ತೊರಳೆಗಳು ದೊಡ್ಡದಾಗಿ ಊದುವದು ಸಾಮಾನ್ಯ. ಇನ್ನೂ ಮುಂದೆ ನೀರ್ದೊಳ್ಳೊಂದಿಗೆ (ಅಸೈಟಿಸ್) ಅರಿಶಿನಾರಿಗೆಯೂ (ಕೆಚೆಕ್ಸಿಯ) ಆಗಬಹುದು. ರೋಗಿ ತುಂಬ ಸುಸ್ತಾಗಿ ಬಡಕಲಾಗುವನು. ಕೆಲವೇಳೆ ಗುದದ ಸುತ್ತಲೂ ಅಂಡಾಣುಗಳು ಒಳಗೆ ಪಸರಿಸಿಕೊಂಡು ಚರ್ಮ ಪಪ್ಪರಿದು (ಇಂಡ್ಯುರೇಟೆಡ್) ಬೊರಿಗೆಗಳು ಆಗುವುವು.

 	ನಿದಾನ: ಮಿಣಿದರ್ಶಕದ ಪರೀಕ್ಷೆಯಿಂದ ಮಲದಲ್ಲಿ ಸೀಳೊಡಲಿಯ ಅಂಡಾಣುಗಳನ್ನು ಕಾಣಬಹುದು. ಕರುಳಲ್ಲಿ ನೆಟ್ಟಗರುಳದರ್ಶಕವನ್ನು ಒಳತೂರಿಸಿ ನೋಡಿದರೆ ನೆರವು ಸಿಗಬಹುದು. ಹುಣ್ಣುಗಳನ್ನು ಕೆರೆದು ಬಂದಿದ್ದರಲ್ಲಿ ಅಂಡಾಣುಗಳಿರಬಹುದು. ಊತುಕಗಳು ಈಡಾಗುವಂತೆ ಇರುವುದರಿಂದ, ಸೀಳೊಡಲಿಗಳ ಉಪ್ಪು ನೀರಿನ ಸಾರಕವನ್ನು ಚರ್ಮದೊಳಕ್ಕೆ ಚುಚ್ಚಿದಾಗ, ಚರ್ಮದಲ್ಲಿ ವಿಶೇಷ ಪ್ರಕ್ರಿಯೆಯನ್ನು ಕಾಣಬಹುದು. ಸೀಳೊಡಲಿಯ ರೋಧಜನಕವನ್ನು (ಆ್ಯಂಟಿಜನ್) ರೋಗಿ ಚರ್ಮಕ್ಕೆ ಚುಚ್ಚಿ ರಕ್ತದಲ್ಲಿ ವಿಶಿಷ್ಟ ರೋಧಕವಸ್ತುಗಳು (ಆ್ಯಂಟಿಬಾಡೀಸ್) ಇರುವುದನ್ನೂ ತೋರಿಸಬಹುದು. ಇವೆರಡೂ ಪೂರಾ ಗುಂಪಿನ ಪರೀಕ್ಷೆಗಳೇ ಹೊರತು ಬೇರೆ ಬೇರೆ ಸೀಳೊಡಲಿಗಳ ಸೊಂಕನ್ನು ಗುರುತಿಸವು. ಸೊಂಕು ಕಳೆದುಹೋದ ಎಷ್ಟೊ ದಿವಸಗಳೂ ಈ ಪರೀಕ್ಷೆಗಳು ಸೊಂಕು ಇರುವುದೆಂದೇ ತೋರುತ್ತಿರುವುವು.
 
	ಚಿಕಿತ್ಸೆ : ಸಾಮಾನ್ಯ ಬಳಕೆಯಲ್ಲಿ ಮಕ್ಕಲೆಬಲದ (ಟ್ರೈವೇಲೆಂಟ್) ರೂಪದ ಸುರಮಾ (ಆಂಟಿಮೊನಿ) ಟಾರ್ಡರೇಟು ಬಲು ಪರಿಣಾಮಕರ ಮದ್ದು. ಆಗ ತಾನೆ ತಯಾರಿಸಿ ರಕ್ತನಾಳಾಂತರವಾಗಿ ಚುಚ್ಚಿ ಹೊಗಿಸಬಹುದು. ಹೀಗೆ 2-3 ವಾರಗಳು ಕೊಡುವುದರ ಬದಲು, ಎರಡೇ ದಿವಸಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಡುವುದು ಉಂಟು. ನಿಯೊಸ್ಟಿಬೊಸಾನ್ ಕೂಡ ಬಳಕೆಯಲ್ಲಿದೆ. ದಿವಸ ಬಿಟ್ಟು ದಿವಸ ರಕ್ತ ನಾಳಾಂತರವಾಗೋ ಸ್ನಾಯುವಿನಲ್ಲೋ ಚುಚ್ಚಿ ಹೊಗಿಸಬೇಕು. ಲಿತಿಯಂ ಸುರಮಾ ತಯೊಮೆಲೇಟ್ (ಅಂತಯಮೆಲೀನ್) ಕೂಡ ಕೊಡುವುದುಂಟು. ಸೀಳೊಡಲಿಗಳ ಮೇಲೆ ಎಮಿಟೀನೂ ಪರಿಣಾಮಕರ. ಆದ್ದರಿಂದ ಇದನ್ನೂ ಒಂದೊಂದು ಬಾರಿ ಬಳಸಬಹುದು. ಇಂದಿನ ಪರಿಣಾಮಕಾರಿ ಮದ್ದು ಮಿರಾಸಿಲ್-ಡಿ. ಮೊದಮೊದಲ ಹಂತಗಳಲ್ಲಿ ಸೊಂಕು ಬಲು ಬೇಗನೆ ಚಿಕಿತ್ಸೆಗೆ ಮಣಿಯುತ್ತದೆ. ಆದರೆ ಮುಂದೆ ಅಂಗರಚನೆ ಬಹಳ ಕೆಟ್ಟ ಮೇಲೆ ಪೂರ್ತಿ ವಾಸಿಯಾಗಲಾರದು. ಆಗ ಶಸ್ತ್ರ ಕ್ರಿಯೆ ಬೇಕಾಗಬಹುದು. (ನೋಡಿ- ಕರುಳುಹುಳುಶಾಸ್ತ್ರ)
ಹೆಗ್ಗರುಳುರಿತ ಮೇಲಿನ ಕಾರಣಗಳೇ ಅಲ್ಲದೆ, ಮಲದಲ್ಲಿ ಆಮು, ರಕ್ತ ಬೀಳುವ ಬೇರೆ ಎಷ್ಟೋ ದೊಡ್ಡ ಕರುಳಿನ ರೋಗಗಳಿವೆ. ಸರಿಯಾದ ಕಾರಣ ಗೊತ್ತಿರದ ನಾಗರಿಕರ ಪ್ರಪಂಚದಲ್ಲಿ ಜನರು ಅನುಭವಿಸುವ ಹಲವಾರು ತೆರನ ಹೆಗ್ಗರುಳುರಿತಗಳಿವೆ (ಕೊಲೈಟಿಸ್). ಹೆಗ್ಗರುಳಿನ ಸುರಿತದ ನರಬೇನೆ ಆದಾಗ ಉಚ್ಚಾಟವಾಗಿ ಕೆಲವೇಳೆ ರಕ್ತದೊಂದಿಗೆ ಲೋಳೆ ಎಳೆಯೆಳೆಯಾಗಿ ಸುರಿವುದು. ಇದು ವಿಪರೀತವಾಗಿ ಕೆಲವೇಳೆ ರಕ್ತದೊಂದಿಗೆ ಕರುಳಿನ ಆಮಿನ ಅಚ್ಚುಗಳು (ಕ್ಯಾಸ್ಟಿಸ್) ಬೀಳುತ್ತವೆ. ಇದು ಪರೆಯ (ಮಂಬ್ರೇನಸ್) ಹೆಗ್ಗರುಳುರಿತ. ತಾನಾಗೇಳುವ ಹುಣ್ಣಾಗಿಸುವ (ಈಡಿಯೋಪತಿಕ್ ಅಲ್ಸರೇಟಿವ್) ಹೆಗ್ಗರುಳುರಿತ ಬಲು ಕೆಟ್ಟ ರೋಗ. ಕೆಲವೇಳೆ ಮಾರಕ ಆಗುವುದುಂಟು. ಮುಖ್ಯವಾಗಿ, ಬೆಳೆಯುವವರ ರೋಗವಿದು. ಆಗಾಗ್ಗೆ ಇದು ಅಣಗಿ, ಇದಕ್ಕಿದ್ದಂತೆ ಜೋರಾಗಬಹುದು, ಹೀಗಾಗುವಾಗ ಚೆನ್ನಾಗಿ ಕಾರಣ ತಿಳಿದಿರುವ ಏಕಾಣುಜೀವಿಕ ಆಮಶಂಕೆಗಳಲ್ಲಿ ಒಂದೆಂದು ಇದನ್ನು ತಿಳಿಯಬಹುದು. ಮದ್ದುಗಳಿಂದಾಗುವ ಚಿಕಿತ್ಸೆಯಲ್ಲಿ, ಪಾದರಸದ ವಿಷವೇರಿದರೆ ಹೆಗ್ಗರುಳುರಿತವೂ ಆಗಿ ಇದೇ ತೆರನಾಗಿರಬಹುದು.

ಮೂತ್ರರಕ್ತ (ಯುರಿಮಿಯ) ಏರಿದಾಗಲೂ ಹೆಚ್ಚು ಕಡಿಮೆ ಹೀಗೆ ಆಗುತ್ತದೆ.
ಉಳಿದ ಕಾರಣಗಳು : ತೀವ್ರ ರೋಗದ ಮೂಲ ಕಾರಣ ಗೊತ್ತಾಗುವ ಎಷ್ಟೊ ಮೊದಲೇ, ಮಲದಲ್ಲಿ ಆಮು ರಕ್ತ ಬೀಳುವ ಕರುಳುಗಳ, ಮುಖ್ಯವಾಗಿ ಹೆಗ್ಗರುಳಿನ, ಹಲವಾರು ಬೇರೆ ರೋಗಗಳಿವೆ. ಹೆಗ್ಗರುಳು, ನೆಟ್ಟಗರುಳಲ್ಲ ಏಡಿಗಂತಿ ಎದ್ದಿದ್ದಾಗ ಆಮಶಂಕೆ ಲಕ್ಷಣಗಳು ತೋರುತ್ತವೆ. ವಯಸ್ಸಾದವರಲ್ಲಿ ಈ ಲಕ್ಷಣಗಳು ಕಂಡಾಗ ನಿಜವಾದ ರೋಗ ಕಾರಣ ಕಂಡುಕೊಳ್ಳುವ ಅವಸರವನ್ನು ಒತ್ತಿ ಹೇಳಿದಂತಾಯಿತು.

 	ದೊಡ್ಡ ಕರುಳಲ್ಲಿ ಹಲವಾರು ಗ್ರಂಥಿಗಂತಿಗಳು (ಅಡಿನೊಮೆಟ) ಹಲಪಾದಿಬೇನೆ (ಪಾಲಿಪೋಸಿಸ್) ಆಗಿದ್ದರೂ ಹೀಗೇ. ವಯಸ್ಸಾದವರಲ್ಲಿ ಸಾಮಾನ್ಯವಾಗಿ ಹೆಗ್ಗರುಳಲ್ಲಿ ಆಗುವ ತಿರುಚೀಲುರಿತ (ಡೈವರ್ಟಿಕ್ಯುಲೈಟಿಸ್) ಇತರ ಹಲತೆರನ ಗಂತಿಗಳನ್ನೂ ಗಮನದಲ್ಲಿ ಇಟ್ಟಿರಬೇಕು. ಏಕಾಣುಜೀವಿ ಇಲ್ಲವೇ ಚಲ್ಕಣದ ಆಮಶಂಕೆಗಳಲ್ಲಿ ಹೊಟ್ಟೆ ನುಲಿದು ಮುಕ್ಕುತ್ತಲೇ ಇರುವುದರಿಂದ ಕರುಳುಗಳ ಒಂದು ಭಾಗ ಮುಂದಿನ ಭಾಗದೊಳಕ್ಕೆ ತೂರಿ ಒಳ್ತೂರಿಕೆ(ಇಂಟುಸಸೆಪ್ಷನ್) ಆಗಬಹುದು. ಚಿಕ್ಕ ಮಕ್ಕಳಲ್ಲಿ ಹಲಪಾದಿ (ಪಾಲಿಪ್) ಕೆರಳಿಸುವದು ಇದರ ಕಾರಣ. ದೊಡ್ಡ ಕರುಳಲ್ಲಿ ಕ್ಷಯ ರೋಗದ ಹುಣ್ಣುಗಳೆದ್ದರೂ ಒಳಗಣ ಮೊಳೆಯು (ಪೈಲ್ಸ್) ಎದ್ದಾಗ ನೆಟ್ಟಗರುಳಲ್ಲಿ ನಂಜು ಹುಣ್ಣಾದರೂ ಮಲದಲ್ಲಿ ಆಮೂ, ರಕ್ತ, ಬೀಳುತ್ತವೆ. ಇವಾವುವೂ ಸಾಂಕ್ರಾಮಿಕ ಸೊಂಕಾಗುವ ಕಾರಣಗಳಲ್ಲ. ಅಲ್ಲದೆ, ಮಲದಲ್ಲಿ ಆಮು ರಕ್ತ ಬೀಳುವುದರ ಜೊತೆಗೆ ಆಯಾ ರೋಗದ ವಿಶಿಷ್ಟ ಲಕ್ಷಣಗಳೂ ಇರುತ್ತವೆ.

 	ನಿರೋಧ : ಸೊಂಕುಗೂಡಿದ ಮಲವೇ ಆಮಶಂಕೆ ಸೊಂಕು ಹತ್ತಿಸಿ ಹರಡುವುದರ ಮುಖ್ಯ ಮೂಲ. ಆದರೆ ಸೊಂಕಿನ ಚಕ್ರದಲ್ಲಿ ಎಷ್ಟೋ ಕಡೆ ತಾಕಬಹುದು. ಸೊಂಕು ಸಾಗಾಣಿಕೆಯ ಸರಪಣಿಯಲ್ಲಿ ಮುಖ್ಯ ಕೊಂಡಿ ಮಲವನ್ನು ತಿನ್ನುತ್ತ ಅಲ್ಲೇ ಮೊಟ್ಟೆ ಇಟ್ಟು ಮರಿ ಮಾಡುವ ನೊಣಗಳು. ಸೊಂಕು ಹತ್ತಿದ ಮಲ ಇರುವವರ ಬೆರಳುಗಳಿಂದ ಎಷ್ಟೊ ವೇಳೆ ಈ ರೋಗಾಣುಗಳ ಜಿಟ್ಟಿಗಳು ದೊರೆತಿವೆ. ಅಂಥವರಿಗೆ ರೋಗದ ಲಕ್ಷಣಗಳಿಲ್ಲದೆ ಕೇವಲ ಹೊರುಗರಾಗಿದ್ದರೆ, ಬಲು ಅಪಾಯಕರ, ಸೊಂಕು ಅನುಮಾನ ಬರುವ ಮೂಲಗಳು. ಇದರಿಂದಲೇ ಆಹಾರ ಪದಾರ್ಥಗಳನ್ನು ಬಡಿಸುವವರನ್ನೂ ಅಡುಗೆಯವರನ್ನೂ ಬಲು ಚೆನ್ನಾಗಿ ಪರೀಕ್ಷಿಸಬೇಕು.

 	ಆದುದರಿಂದ ಮಲದ ಸಾಗಾಣೆ, ತೀರಿಕೆಯೇ ಏಕಾಣುಜೀವಿಕ ಚಲ್ಕಣದ ಆಮ್ಲ ಶಂಕೆಗಳ ಮುಖ್ಯವಾದ ರೋಗ ತಡೆವ ಕ್ರಮಗಳು. ಕಕ್ಕಸುಗಳು, ಆಹಾರಕೋಣೆ, ಅಡುಗೆ ಮನೆ, ಊಟದ ಮನೆ, ಉಪಹಾರ ಮಂದಿರಗಳು, ಹೋಟೆಲುಗಳಿಗೆ ನೊಣಗಳು ಬರದಂತೆ ತಡೆದು ಅವನ್ನು ಸಾಯಿಸಬೇಕು. ಬಡಿಸುವವರು, ಬಾಣಸಿಗರು, ಅಡುಗೆಮನೆ, ಊಟದ ಮನೆಗಳ ಪಾತ್ರೆಗಳೂ ಚೊಕ್ಕಟವಾಗಿರಬೇಕು. ಸೊಂಕು ಹತ್ತಿರುವವರ ಚಿಕಿತ್ಸೆ ಬೇಗನೆ ಚೆನ್ನಾಗಿ ಮಾಡಿ ಸೊಂಕಿನ ಮೂಲವನ್ನು ಅಣುಗಿಸಬೇಕು. ರೋಗಾಣುಗಳ ಹೊರುಗರನ್ನು ಆಹಾರ ಮುಟ್ಟಗೊಡಿಸದೆ ಕೆಲಸದಿಂದ ತೆಗೆಯಬೇಕು. ಕರುಳುಹುಳುವಿನ ಆಮಶಂಕೆಯಲ್ಲಿ ಬೇರೆ ರೀತಿಯಿಂದ ಹತ್ತುವುದರಿಂದಲೂ ಅವಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು. ಉದಾಹರಣೆಗಾಗಿ, ಸೀಲೊಡಲಿಯ ಆಮಶಂಕೆಯ ಹತೋಟಿಗಾಗಿ ನಡಂತರದ ಆಸರಿಗವಾಗಿ (ಹೋಸ್ಟ್) ಬಸವನ ಹುಳುವನ್ನೊ, ಬಾಲಗೂದಲಿಗಳನ್ನೊ ಸಾಯಿಸುವ ದೊಡ್ಡ ಪ್ರಮಾಣಗಳ ರಾಸಾಯನಿಕ ಇಲ್ಲವೇ ಜೀವಿಜ್ಞಾನಕ ವಿಧಾನಗಳನ್ನು ಕೈಗೊಂಡು, ಸೊಂಕು ಹತ್ತಿದ ಅನುಮಾನವಿರುವ ನೀರನ್ನು ಕುಡಿಯಲೂ ಬಾರದು. ಅದರಲ್ಲಿ ಕಾಲಿಡಲೂ ಕೂಡದು. ಸ್ನಾನವಂತೂ ಮೊದಲೇ ಕೂಡದು.	
		
(ಕೆ.ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ